Registration for the School Year 2026 - 2027 is now Open. Please click here for Registration form
ಅರೇ ನೀವು ಕನ್ನಡ ಮಾತಾಡ್ತೀರಾ!! ಚೆನ್ನಾಗಿದ್ದೀರಾ!!
ಹುಟ್ಟೂರಿನ ನೆನಪುಗಳ ಜೊತೆ ನಾಡಿನ ಭಾಷೆ, ಸಂಸ್ಕೃತಿಯ ಅನುಭವಗಳನ್ನು ಹೊತ್ತು ಉದ್ಯೋಗವನ್ನರಸಿ ಅಮೇರಿಕಾದಲ್ಲಿ ಬದುಕು ಕಟ್ಟಿಕೊಂಡ ಕನ್ನಡಿಗರಿಗೆ ಈ ಮಾತುಗಳು ಬಾಂಧವ್ಯ ಬೆಸೆಯುವ ಜಾದೂಪದಗಳೇ ಸರಿ. ಸುತ್ತಲೂ ಆಂಗ್ಲಮಯವಾದ ಪರಿಸರದಲ್ಲಿ ಕಸ್ತೂರಿ ಕನ್ನಡದ ಕಂಪು ನೀಡುವ ಆನಂದ ವರ್ಣನಾತೀತ. ಮರುಭೂಮಿಯಲ್ಲಿ ಹನಿ ನೀರು ಹುಡುಕುವಲ್ಲಿ, ಕಾವೇರಿಯ ಸಿಹಿ ನೀರಿನ ಬುಗ್ಗೆ ಸಿಕ್ಕಹಾಗೆ ಅದು.
ಕನ್ನಡವೆಂದರೆ ಬರಿಯ ಭಾಷೆಯಷ್ಟೇ ಅಲ್ಲ, ಕೋಟ್ಯಂತರ ಜನರ ಜೀವ ಮಿಡಿತವದು, ಜೀವನ ಧರ್ಮವದು, ಜ್ಞಾನದಾಹಿಗಳಿಗೆ ಸುಧಾರಸದ ಚಿಲುಮೆಯದು. ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಶ್ರೀಮಂತ ಪರಂಪರೆ, ಸಮೃದ್ಧ ಸಾಹಿತ್ಯ ಸಿರಿ ರಾಶಿಯ ವಾರಿಧಿ ನಮ್ಮ ಕನ್ನಡ. ಇಂತಹ ಶ್ರೇಷ್ಠ ಭಾಷೆಯ ಹೊಣೆ ಹೊತ್ತ ವಾರಸುದಾರರು ನಾವು. ಕನ್ನಡ ಭಾಷೆಯನ್ನು ಬರಿ ಆಡುಮಾತಿಗೆ ಸೀಮಿತ ಮಾಡದೆ, ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ, ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗಲೇ ಕನ್ನಡ ಉಳಿದು ಭವ್ಯವಾಗಿ ಬೆಳೆಯಲು ಸಾಧ್ಯ.
ಸವಿಗನ್ನಡದ ರುಚಿ ನಾವು ಸವಿದರಷ್ಟೇ ಸಾಲದು, ನಮ್ಮ ಮಕ್ಕಳೂ ನಮ್ಮ ಭಾಷೆ ಸಂಸ್ಕೃತಿಯ ರಾಯಭಾರಿಗಳಾಗಬೇಕು ಎನ್ನುವ ಧ್ಯೇಯದೊಂದಿಗೆ ನಾರ್ತ್ ಕ್ಯಾರೋಲಿನಾ ಟ್ರಯಾಂಗಲ್ ಕನ್ನಡ ಕಲಿ ಶಾಲೆ ೧೯೯೬ ರಲ್ಲಿ ಪ್ರಾರಂಭವಾಯಿತು. ನಾರ್ತ್ ಕೆರೊಲಿನಾದಲ್ಲಿನ ಕೇರಿ , ಮೊರ್ರಿಸ್ವಿಲ್, ಅಪೆಕ್ಸ್ ಪ್ರಾಂತ್ಯಗಳಲ್ಲಿ ನೆಲೆಸಿರುವ ಕನ್ನಡಾಸಕ್ತರ ನಿರಂತರ ಪ್ರೋತ್ಸಾಹ ಮತ್ತು ಸಹಕಾರದಿಂದ ನಮ್ಮ “ಕನ್ನಡ ಕಲಿ” ಶಾಲೆ ರೂಪುಗೊಂಡಿತು. ಇಂದು ೫೦ಕ್ಕೂ ಮೀರಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಭಾಷೆ ಹಾಗು ಸಂಸ್ಕೃತಿಯನ್ನು “ಕನ್ನಡ ಕಲಿ” ಶಾಲೆಯಲ್ಲಿ ಕಲಿಯುತ್ತಿದ್ದಾರೆ. ೨೦೧೨ ರ ಶೈಕ್ಷಣಿಕ ವರ್ಷದಿಂದ ಕನ್ನಡ ಅಕಾಡೆಮಿಯ ಪಠ್ಯಕ್ರಮವನ್ನು ಅಳವಡಿಸಿಕೊಂಡು ಮಕ್ಕಳಿಗೆ ಹಂತಹಂತವಾಗಿ ಕನ್ನಡವನ್ನು ಪರಿಚಯಿಸುತ್ತಿದ್ದೇವೆ.
ಕಸ್ತೂರಿ ಕನ್ನಡದ ಕಂಪು ಎಲ್ಲೆಲ್ಲೂ ಹರಡಿ ಅಸೀಮ, ಆದಿಗಂತವಾಗಬೇಕು. ಒಟ್ಟಾಗಿ ಕೈಜೋಡಿಸಿ ಕನ್ನಡದ ಹಿರಿಮೆಯನ್ನು ನಾವೆಲ್ಲಾ ಎತ್ತಿ ಸಾರೋಣ. ತಾಯಿ ಭುವನೇಶ್ವರಿಗೆ ನಮಿಸುತ್ತಾ ಮನೆಮನೆಗಳಲ್ಲಿ, ಮನಮನಗಳಲ್ಲಿ ಕನ್ನಡದ ದೀಪ ಹಚ್ಚೋಣ 🙏
ನಾರ್ತ್ ಕ್ಯಾರೋಲಿನಾ ಟ್ರಯಾಂಗಲ್ ಕನ್ನಡ ಕಲಿ ಶಾಲೆ - USA